ಕಿರಾತಗೂಸುತನ

 ಎಳೆಗೂಸುಗಳಲ್ಲಿ ಹುಟ್ಟುವಾಗಲೇ ಅಂಗ, ಅವಯವಗಳು ಇಲ್ಲದೆಯೋ ವಿಷರೀತ ದೊಡ್ಡದು ಇಲ್ಲದೇ ಸಣ್ಣದಾಗೋ ಎಂದಿನ ಜಾಗ ಬಿಟ್ಟೋ ಇರುವಿಕೆ (ಮಾನ್ಸ್ಟ್ರಾಸಿಟಿ) ರಾಕ್ಷಸನನ್ನು ಹೋಲುವ ಈ ಕಿರಾತಗೂಸು (ಮಾನ್‍ಸ್ಟರ್) ಒಂಟಿ ಇಲ್ಲವೇ ಅವಳಿಯಾಗಿರಬಹುದು. ವಿಕಾರವಾಗಿದ್ದರೂ ಕೂಸುಬದುಕಿರಲೂಬಹುದು. ಆರೋಗ್ಯವಾಗಿರಲೂಬಹುದು. ಕೈಕಾಲುಗಳಲ್ಲಿ ಬೆಟ್ಟುಗಳು ಹೆಚ್ಚು ಇಲ್ಲವೇ ಕಡಿಮೆಯಾಗಿರಬಹುದು. ಒಂದಕ್ಕೊಂದು ಅಂಟಿರಲೂಬಹುದು. ಗರ್ಭದಲ್ಲಿ ಪಿಂಡದ ವಿಕಾಸವಾಗುವಾಗ, ಹುಟ್ಟಿದ ಮೇಲೆ ಇನ್ನಿಲ್ಲವಾಗಬೇಕಾದ ಅಂಗಗಳು ಹಾಗೇ ಉಳಿಯಬಹುದು. ಬಿಡಿಯಾಗಿರಬೇಕಾದ ಎಷ್ಟೋ ಒಳಾಂಗಗಳು ಒಂದಕ್ಕೊಂದು ಅಂಟಿರಬಹುದು. ವಿಕಾಸದ ಹೊತ್ತಿನಲ್ಲಿ ಹಲವು ಸಂದುಗಳು, ಬಿರುಕುಗಳು ಸರಿಯಾಗಿ ಕೂಡಬೇಕಾದವು ಒಂದು ಭಾಗವೋ ಪೂರ್ತವೋ ಹಾಗೇ ಉಳಿದುಬಿಡಬಹುದು ಎರಡು ಕಣ್ಣುಗಳೂ ಹಣೆ ನಡುವೆ ಒಂದುಗೂಡಿ ಒಕ್ಕಣ್ಣು ಆಗಬಹುದು.

 ಅವಳಿ ಮಕ್ಕಳು ಹುಟ್ಟುವಾಗ ಒಂದಕ್ಕೊಂದು ಅಂಟಿಕೊಂಡು ಅವಳಿ ಕಿರಾತಗೂಸು ಹುಟ್ಟಬಹುದು. ಹೀಗೆ ಕೂಡಿರುವಾಗ ಎರಡೂ ಸಮವಾಗಿ ಇಲ್ಲವೇ ಒಂದು ದೊಡ್ಡದು ಒಂದು ಸಣ್ಣದು ಆಗಿರಬಹುದು. ಸಮವಾದಲ್ಲಿ, ಅವಳಿಗಳು ಒಂದಕ್ಕೊಂದು ತಲೆತಲೆಗೋ ಮುಂಡಮುಂಡಕ್ಕೋ ಪಿರ್ರೆಪಿರ್ರೇಗೋ ಅಂಟಿರಬಹುದು. ಎರಡು ಮೊಗಗಳೂ ಬೇರೆ ಬೇರೆ ಕಡೆಗೆ ತಿರುಗಿರಬಹುದು. ಇಲ್ಲವೇ ಒಂದು ತಲೆಗೆ ಎರಡು ಮುಂಡಗಳು ತಗಲಿರಬಹುದು. ಮುಂಡಗಳೆರಡೂ ಒಂದಾಗಿದ್ದು ತಲೆಗಳು ಎರಡಿರಬಹುದು. ಎದೆಗಳು ಪಕ್ಕದಲ್ಲೋ ಎದುರುಬದುರಾಗೋ ಒಂದಕ್ಕೊಂದು ಅಂಟಿದ್ದು, ಉಳಿದ ಮೈ ಭಾಗಗಳು ಬೇರೆಯಾಗಿ ಉಳಿದಿರಬಹುದು. ಹಾಗೇ ಅವಳಿಗಳು ಪೂರ್ತಿಯಾಗಿ ಬೇರೆಬೇರೆಯಾಗಿದ್ದರೂ ಕೇವಲ ತಲೆ, ಎದೆ, ನಡು, ಕುಂಡಿ, ಇಲ್ಲವೇ ಬೆನ್ನುಗಳಲ್ಲಿ ಮಾತ್ರ ಅಂಟಿರಬಹುದು. ಸಯಾಮೀ ಅವಳಿಗಳಾಗಿ ಅಸಮಕಿರಾತಗೂಸುಗಳು ಗರ್ಭದಲ್ಲಿ ಪಿಂಡಗಳಾಗಿದ್ದಾಗ ಎರಡೂ ಸಮವಾಗಿ ವಿಕಾಸವಾಗುತ್ತಿದ್ದರೂ ಒಂದು ಸತ್ತು ಕೇವಲ ಮಾಂಸದ ಮುದ್ದೆಯಾಗಿ ಉಳಿಯಬಹುದು ಕೆಲವೇಳೆ ಅವಳಿಗಳಲ್ಲಿ ಒಂದು ಸಾಯದೆಯೇ ಅದರ ಬೆಳೆವಣಿಗೆ ಕುಂದಿದರೆ ಆಗ ಅದು ಇನ್ನೊಂದರ ಮೇಲೆ ಪರಪಿಂಡಿಯಾಗಿರುತ್ತದೆ. ಈ ಪರಪಿಂಡಿ ಚೆನ್ನಾಗಿ ವಿಕಾಸವಾಗಿ ಪಿಂಡಗೂಸಿನ ಹಾಗೆ ತೋರಬಹುದು. ಇಲ್ಲವೇ ಕೇವಲ ಹಲ್ಲು ಕೂದಲು ಉಗುರಂಥ ಕೆಲವು ಊತಕಗಳ ಗೆಡ್ಡೆಯಾಗಿರಬಹುದು.

(ಪಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ